ಪಾರಂಪರಿಕ ತಿಳಿವಳಿಕೆಯ ಆಕರಗಳು
ಶಿವತತ್ವ ರತ್ನಾಕರ
  1. ಪುಸ್ತಕದ ಹೆಸರು        : ‘ಶಿವತತ್ವ ರತ್ನಾಕರ
  2. ಲೇಖಕನ ಹೆಸರು       : ಬಸವಪ್ಪ ನಾಯಕ-1, ಬಸವ ಭೂಪಾಲ, (ಆಳ್ವಿಕೆ ಕ್ರಿ.ಶ. 1697-ಕ್ರಿ.ಶ. 1714)
  3. ಕಾಲ   : ಹದಿನೇಳನೆಯ ಶತಮಾನ (ಈ ಪುಸ್ತಕವನ್ನು ಬರೆದ ಕಾಲ ಕ್ರಿ.ಶ. 1699)
  4. ವಸ್ತು   : ಸಂಸ್ಕೃತ ಭಾಷೆಯಲ್ಲಿರುವ ವಿಶ್ವಕೋಶ
  5. ಕಿರುಪರಿಚಯ:  ‘ಶಿವತತ್ತ್ವರತ್ನಾಕರವು ಕೆಳದಿ-ಬಿದನೂರು ರಾಜವಂಶದಲ್ಲಿ ದೊರೆಯಾಗಿದ್ದ ಬಸವಪ್ಪ ನಾಯಕನು ರಚಸಿರುವ ವಿಶ್ವಕೋಶ. ಈ ಕೃತಿಯು ಸಂಸ್ಕೃತದಲ್ಲಿದೆ.  ಬಸಪ್ಪನಾಯಕನು ಪ್ರಸಿದ್ಧ ರಾಣಿಯಾದ ಚೆನ್ನಮ್ಮಾಜಿಯ ದತ್ತು ಮಗ. ಪರಾಕ್ರಮಿಯೂ ಉದಾರನೂ ಆಗಿದ್ದ ಈ ರಾಜನು ಸಂಸ್ಕೃತಿ-ಕಲೆಗಳ ಪೋಷಕನಾಗಿದ್ದನು. ಅವನು ಶಿವತತ್ವ ರತ್ನಾಕರವಲ್ಲದೆ ಸುಭಾಷಿತ  ಸುರದ್ರುಮ ಮತ್ತು ಸೂಕ್ತಿ ಸುಧಾಕರ ಎಂಬ ಪುಸ್ತಕಗಳನ್ನೂ ಬರೆದಿದ್ದಾನೆ. ಇವುಗಳಲ್ಲಿ ಸೂಕ್ತಿ ಸುಧಾಕರವು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಸಂಯೋಜನೆಯಾದರೆ, ಉಳಿದೆರಡು ಸಂಸ್ಕೃತ ಕೃತಿಗಳು. ತಾನು ಈ ಕೃತಿಗಳನ್ನು ವಿದ್ವಾಂಸರು ಹಾಗೂ ಜನಸಾಮಾನ್ಯರ ಮಾಹಿತಿಗಾಗಿ, ತಿಳಿವಳಿಕೆಗಾಗಿ ಹಾಗೂ ಸಂತೋಷಕ್ಕಾಗೆ ರಚಿಸಿರುವೆನೆಂದು ಬಸವಭೂಪಾಲನು ಹೇಳಿಕೊಂಡಿದ್ದಾನೆ. ಲಿಂಗಣ್ಣ ಕವಿಯು ಬರೆದ ಕೆಳದಿನೃಪವಿಜಯವೆಂಬ ಕಾವ್ಯವು ಈ ರಾಜನ ಪಾಂಡಿತ್ಯ ಮತ್ತು ವ್ಯಕ್ತಿತ್ವಗಳನ್ನು ಪ್ರಶಂಸಿಸುತ್ತದೆ.

 

            ‘ಶಿವತತ್ವ ರತ್ನಾಕರವು ಅನೇಕ ಸಾಹಿತ್ಯಕೃತಿಗಳು ಮತ್ತು ಜ್ಞಾನಕೇಂದ್ರಿತ ಕೃತಿಗಳು ಹಾಗೂ ಜನಗಳಿಂದ ಸಂಗ್ರಹಿಸಿದ ಅಗಾಧ ಪ್ರಮಾಣದ ಮಾಹಿತಿಯನ್ನು ಒಳಗೊಂಡಿದೆ. ಅದರಲ್ಲಿಯೂ ಸಂಗೀತ, ಚಿತ್ರಕಲೆ, ಮತ್ತು ಶಿಲ್ಪಗಳಿಗೆ ಸಂಬಂಧಿಸಿದ ಅನೇಕ ಕೃತಿಗಳನ್ನು ಅವನು ಹೆಸರಿಸಿದ್ದಾನೆ. ಅವುಗಳಲ್ಲಿ ಎಷ್ಟೋ ಪುಸ್ತಕಗಳು ಈಗ ಮರವೆಗೆ ಸಂದಿವೆ, ಅನುಪಲ್ಧವಾಗಿವೆ. ಇದರಲ್ಲಿ ಕಲ್ಲೋಲ ಎಂದು ಹೆಸರಿಸಿರುವ ಒಂಬತ್ತು ಅಧ್ಯಾಯಗಳಿವೆ. ಪ್ರತಿ ಅಧ್ಯಾಯದಲ್ಲಿಯೂ ತರಂಗಗಳೆಂಬ ಉಪ ಅಧ್ಯಾಯಗಳಿವೆ. ಈ ಪುಸ್ತಕದಲ್ಲಿ ಒಟ್ಟು 108 ತರಂಗಗಳಿವೆ. ಒಟ್ಟು ಶ್ಲೋಕಗಳ ಸಂಖ್ಯೆ 35000. ಶಿವತತ್ವರತ್ನಾಕರವು ಸ್ಥಳೀಯವಾದ ಹಾಗೂ ಸಾಂಪ್ರದಾಯಿಕವಾದ ಜ್ಞಾನದ ಬಹುದೊಡ್ಡ ಆಕರ. ಅವನ ಕಾಲದಲ್ಲಿ ಪ್ರಚಲಿತವಾಗಿದ್ದ ಎಲ್ಲ ಜ್ಞಾನಶಾಖೆಗಳನ್ನೂ ಬಸಪ್ಪನಾಯಕನು ಪ್ರಸ್ತಾಪಿಸುತ್ತಾನೆ. ತತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಾಡಳಿತ, ಯುದ್ಧವಿದ್ಯೆ, ಕೃಷಿ, ಇತಿಹಾಸ, ಭೂಗೋಳ, ಜ್ಯೋತಿಷ್ಯ, ಖಗೋಳಶಾಸ್ತ್ರ, ಕಾಮಶಾಸ್ತ್ರ, ಶಿಲ್ಪ. ನಾಟಕ, ುದ್ಯಾನನಗಳ ನಿರ್ಮಾಣ, ಜಲಶಾಸ್ತ್ರ, ಜಲಾನ್ವೇಷಣೆ, ಸಂಗೀತಶಾಸ್ತ್ರ ಮತ್ತು ನೃತ್ಯಗಳು ಅವುಗಳಲ್ಲಿ ಕೆಲವು. ಇವೆಲ್ಲದರ ಬಗ್ಗೆಯೂ ವಿವರವಾದ ಚರ್ಚೆ ಇದೆ. ಒಟ್ಟು ಕೃತಿಗೆ ಪೂರ್ವಪೀಠಿಕೆಯ ಹಾಗೆ, ಕೆಳದಿ ರಾಜವಂಶದ ಇತಿಹಾಸವನ್ನು ನಿರೂಪಿಸಲಾಗಿದೆ. ಇಡಿ ಕೃತಿಯನ್ನು ಮಗ ಸೋಮಶೇಖರ ಮತ್ತು ತಂದೆ ಬಸವ ಭೂಪಾಲರ ಸಂಭಾಷಣೆಯ ರೂಪದಲ್ಲಿ ರಚಿಸಲಾಗಿದೆ. ಮಗನು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ತಂದೆಯು ಸೂಕ್ತ ಉತ್ತರಗಳನ್ನು ನೀಡುತ್ತಾನೆ. ಈ ವಿಧಾನವು ಓದುಗರ ಆಸಕ್ತಿಯನ್ನು ಕೆರಳಿಸುತ್ತದೆ ಮತ್ತು ಉಳಿಸಿಕೊಳ್ಳುತ್ತದೆ. ಈ ವಿಶ್ವಕೋಶದಲ್ಲಿ ಸಂಗೀತ, ಜಲಶಾಸ್ತ್ರ ಮತ್ತು ನೃತ್ಯಮಂದಿರಗಳ ನಿರ್ಮಾಣದ ಬಗೆಗಿನ ಮಾಹಿತಿಗಳಂತೂ ಬಹಳ ಕುತೂಹಲಕರವೂ, ಉಪಯಕ್ತವೂ ಆಗಿವೆ. ಉದಾಹರಣೆಗೆ, ಅವನು ಹಳದಿ ಮತ್ತು ಬಿಳಿಯ ಮೋಡಗಳು ಕಡಿಮೆ ಪ್ರಮಾಣದ ಮಳೆಯನ್ನು ತಂದರೆ, ಕಪ್ಪು ಮತ್ತು ಕೆಂಪು ಮೋಡಗಳು ಭಾರೀ ಪ್ರಮಾಣದ ಮಳೆಯನ್ನು ತರುತ್ತವೆ. ಒಳ್ಳೆಯ ಜಲವಿಜ್ಞಾನಿಯು ಮೋಡಗಳ ರಚನೆಯನ್ನು ಕನಿಷ್ಠ ಹದಿನೈದು ದಿನಗಳಿಗಿಂತ ಮುಂಚಿತವಾಗಿಯೇ ಗ್ರಹಿಸುವ ಸಾಮರ್ಥ್ಯವನ್ನು ಪಡೆದಿರುತ್ತಾನೆ. ಅದನ್ನು ಬಳಸಿ ಅವನು ಜನರಿಗೆ ಮಾರ್ಗದರ್ಶನ ನೀಡಬೇಕುಎಂದು ಹೇಳುತ್ತಾನೆ. ಇದು ನಿದರ್ಶನ ಮಾತ್ರ. ಇಂತಹ ನೂರಾರು ಹೇಳಿಕೆಗಳು ಈ ಕೃತಿಯಲ್ಲಿವೆ. ಇವುಗಳನ್ನು ಗುರುತಿಸುವ, ಬೆಲೆಕಟ್ಟುವ ಮತ್ತು ಬಳಸಿಕೊಳ್ಳುವ ಅಗತ್ಯವಿದೆ.

 

  1. ಪ್ರಕಟಣೆಯ ಇತಿಹಾಸ   :   

ಅ. ಮೊದಲ ಆವೃತ್ತಿ: 1927, ಸಂಪಾದಕರು : ಬೆನಗಲ್ ರಾಮರಾವ್ ಮತ್ತು ಪಾನ್ಯಂ ಸುಂದರಶಾಸ್ತ್ರಿ, ಪ್ರಕಾಶಕರು. ಬಿ.ಎಂ. ನಾಥ್ ಅಂಡ್ ಕಂಪನಿ, ಮದ್ರಾಸ್

ಆ. ಎರಡನೆಯ ಆವೃತ್ತಿ: ಸಂಪುಟ-1, 1964, ಸಂ. ಎಸ್. ನಾರಾಯಣಸ್ವಾಮಿ ಶಾಸ್ತ್ರಿ, ಸಂಪುಟ-2, 1964, ಸಂ. ಆರ್.ರಾಮಶಾಸ್ತ್ರಿ, 1964 ಪ್ರಕಾಶಕರು: ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಮೈಸೂರು, ಸಂಪುಟ-3, ಸಂ. ಮರಿಬಸವಾರಾಧ್ಯ, 1985, ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಇ. ಮೂರನೆಯ ಆವೃತ್ತಿ: ಎರಡು ಸಂಪುಟಗಳಲ್ಲಿ, 1999, ಸಂ. ಮಲ್ಲೇಪುರಂ ಜಿ.ವೆಂಕಟೇಶ, ಪ್ರ.      ಕನ್ನಡ ವಿಶ್ವವಿದ್ಯಾಲಯ, ಹಂಪಿ. (ಕನ್ನಡ ಅನುವಾದದೊಂದಿಗೆ)    

 

  1. ಮುಂದಿನ ಓದು           :

ಅ. ‘Musical Aspects in the ‘Sivatattvaratnakara’ By Basava Bhupala-A Study’ by E.R. Saraswathi Venkateswaran

ಆ. A FORGOTTEN SCHOOL OF CARNATIC MUSIC (An important article by Dr R.Nagaswami on the topics musicology in ‘Shivatattva Ratnakara’)

ಇ. Shivatattvaratnakara of Keladi Basavaraja-A Cultural Study’ by Radha Krishna Murthy, 1995, Published by  Keladi Museum and Historical Research Bureau.

 ಉ. News Today (Another article by Sri V.Sundaram)

ಊ.http://www.newstodaynet.com/printer.php?id=16727 (An elaborate article on Shivatattfva Ratnakara)

 

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು